ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಸೊಂಟತ್ರಾಣದ ವೇಗವು ಪಾತ್ರದ ವೇಗವಲ್ಲ!

ಲೇಖಕರು :
ನಾ.ಕಾರ೦ತ, ಪೆರಾಜೆ
ಬುಧವಾರ, ಜನವರಿ 6 , 2016

ಕಾಲಮಿತಿಯ ಪ್ರದರ್ಶನಗಳಿಗೆ ಮನಸ್ಸು ಒಗ್ಗಿಹೋಗಿದೆ. ಮೂನಾಲ್ಕು ಗಂಟೆಗಳ ಪ್ರಸಂಗಗಳು ಒಂದೂವರೆ ಗಂಟೆಗೆ ಇಳಿದಿವೆ. ಪಾತ್ರ, ಪ್ರಸಂಗಗಳು ವೇಗವನ್ನು ಹೆಚ್ಚಿಸಿಕೊಂಡಿವೆ. ನೋಡುಗನೂ ವೇಗಕ್ಕೆ ಟ್ಯೂನ್ ಆಗುತ್ತಾ ಇದ್ದಾನೆ! ಕಣ್ಣುರೆಪ್ಪೆ ಮುಚ್ಚಿ ಮುಗಿಯುವುದರೊಳಗೆ ಸನ್ನಿವೇಶಗಳು ಹಾರಿ ಬಿಡುತ್ತವೆ. ಪಾತ್ರದ ರಸಗಳು, ಅದಕ್ಕೆ ತಕ್ಕುದಾದ ಭಾವಗಳು ನೋಡುಗನ ಮನದೊಳಗೆ ಇಳಿಯುವ ಮೊದಲೇ ಪ್ರಸಂಗ ಮುಗಿದುಹೋಗುತ್ತವೆ! ಆಟ ಮುಗಿಸಿ ಮರಳಿದಾಗ ನನ್ನೊಳಗೆ ಆಟದ ಗುಂಗು ರಿಂಗಣ ಹಾಕದೆ ಅಳಿದುಬಿಟ್ಟಿದೆ. ಈ ಸಮಸ್ಯೆಗೆ ಕಲಾವಿದ ಹೇಳಬಹುದು, 'ಆಟ ನೋಡಲು ಗೊತ್ತಿಲ್ಲ.!' ವಿಮರ್ಶಕ ಹೇಳಬಹುದು, 'ನಿಮಗೆ ರಸಪ್ರಜ್ಞೆಯಿಲ್ಲ.!' ಮೇಳದ ಯಜಮಾನ ಹೇಳಬಹುದು, 'ಕಾಲಮಿತಿ ಅಲ್ವೋ, ಅನಿವಾರ್ಯ.!' ಹೀಗೆ ಸಮರ್ಥನೆಗಳ ಮಹಾಪೂರಗಳು ನನ್ನೊಳಗೆ ಇಳಿಯದ ರಸಗುಂಗಿಗೆ ಉತ್ತರವಾಗಲಾರದು.

ಸಂದುಹೋದ ಹಿಮ್ಮೇಳ ಕಲಾವಿದರ ವಾದನಗಳ ರೋಚಕತೆಗಳನ್ನು ಕರ್ಣಾಕರ್ಣಿಕೆಯಾಗಿ ಕೇಳಿ ಆನಂದ ಪಟ್ಟಿದ್ದೇವೆ. ಬೆರಗಾಗಿದ್ದೇವೆ. ಈ ರೋಚಕಗಳೆಲ್ಲಾ ಭೂತಕಾಲದ ಸಜೀವ ಕಥನಗಳು. ಕಾಲದ ಅಲಿಖಿತ ದಾಖಲೆಗಳು. ಅದರಲ್ಲಿ ವರ್ತಮಾನದ ನೆರಳಿದೆ. ಉದಾಃ 'ಪಾಂಡವಾಶ್ವಮೇಧ' ಪ್ರಸಂಗ ಎಂದಿಟ್ಟುಕೊಳ್ಳೋಣ. ದೂರದ ಶ್ರೋತೃ ಚೆಂಡೆ ವಾದನದ ನಾದವನ್ನಾಲಿಸಿ 'ಇದು ಇಂತಹ ವೇಷದ ಪ್ರವೇಶ' ಎಂದು ತಿಳಿಯುತ್ತಿದ್ದ. ಚೆಂಡೆಯ ನಾದ ಮತ್ತು ಕಾಲದ ಲೆಕ್ಕಾಚಾರದಿಂದ ದೂರದ ಶ್ರೋತೃ ಪಾತ್ರವನ್ನು ಗ್ರಹಿಸುತ್ತಾನೆ ಎಂದಾದರೆ ಅದು ಚೆಂಡೆ ವಾದಕರ ಬೌದ್ಧಿಕ ಗಟ್ಟಿತನ ಮತ್ತು ಜಾಣ್ಮೆ ಆದರೂ ಅಲ್ಲಿ ಎದ್ದು ಕಾಣುವುದು - 'ಕಾಲ ಪ್ರಮಾಣದ ನುಡಿತಗಳು'.

ಚಿತ್ರ ಕೃಪೆ : ಮುರಳಿ ರಾಯರಮನೆ
ಕಾಲಪ್ರಮಾಣವನ್ನು ಕಾಲಮಿತಿಯು ನುಂಗಿದೆ. ಕಥಾರಂಭದಲ್ಲೇ ನಾಲ್ಕನೇ ಕಾಲದ ಓಟ. ದೇವೇಂದ್ರ, ಇಂದ್ರಜಿತು, ಹಿರಣ್ಯಾಕ್ಷ, ರಕ್ತಬೀಜ.. ಪಾತ್ರಗಳ ರಂಗನಡೆಗಳ ಒಂದೇ ರೀತಿ ಕಾಣುತ್ತವೆ. ಹಿಮ್ಮೇಳ ಭಾಷಾವಿದ ಪದ್ಯಾಣ ಶಂಕರನಾರಾಯಣ ಭಟ್ ಒಮ್ಮೆ ವಿಷಾದದಿಂದ ಹೇಳಿದ್ದರು - "ಕಾಲಪ್ರಮಾಣಕ್ಕೆ ಅನುಗುಣವಾಗಿಯೇ ಪಾತ್ರಗಳು ರಂಗಪ್ರವೇಶ ಮಾಡಬೇಕು. ಒಂದೊಂದು ಪಾತ್ರಕ್ಕೆ ಒಂದೊಂದು ವೇಗ. ಕಾಲಪ್ರಮಾಣಗಳ ನಿರ್ವಹಣೆಯು ಪ್ರೇಕ್ಷಕರ ಮೇಲೆ ಗಣನೀಯ ಪರಿಣಾಮ ಕೊಡುತ್ತದೆ. ಇಂದು ಒಬ್ಬೊಬ್ಬ ಕಲಾವಿದನ ಪಾತ್ರದಲ್ಲಿ ಒಂದೊಂದು ವೇಗ. ಅವರ ಕುಣಿತಕ್ಕೆ ಸರಿಯಾಗಿ ಚೆಂಡೆ ಬಾರಿಸದಿದ್ದರೆ ಚೆಂಡೆ ಬಾರಿಸಲು ಬರುವುದಿಲ್ಲ ಎನ್ನುವ ಅಪವಾದ ಎದುರಿಸಬೇಕಾಗುತ್ತದೆ..!"

ಹಾಗಿದ್ದರೆ ಪಾತ್ರಗಳ ವೇಗದ ಪ್ರಮಾಣ ಹೇಗೆ ಮತ್ತು ಎಷ್ಟು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಚಿಕ್ಕಯತ್ನವೊಂದು ಪುತ್ತೂರಿನಲ್ಲಿ ನಡೆಯಿತು. ಬೊಳ್ವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ 'ಆಂಜನೇಯ 47' ಕಾರ್ಯಕ್ರಮದಲ್ಲಿ ಭಾಗವತ ಪ್ರಸಾದ್ ಬಲಿಪ ನಿರದೇಶನದಲ್ಲಿ ಪ್ರಾತ್ಯಕ್ಷಿಕೆ ಜರುಗಿತ್ತು. ಶ್ರೀಗಳಾದ ಕುಮಾರ ಸುಬ್ರಹ್ಮಣ್ಯ ವಳಕುಂಜ, ಪುಂಡಿಕಾಯಿ ರಾಜೇಂದ್ರ ಹಿಮ್ಮೇಳದಲ್ಲಿ ಸಹಕರಿಸಿದ್ದರು. ಯಕ್ಷಗುರು ದಿವಾಣ ಶಿವಶಂಕರ ಭಟ್ಟರು ವೇಷ ತೊಡದೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಸುಮಾರು ಒಂದೂವರೆ ಗಂಟೆಗಳ ಲಂಬಿಸಿದ ಪ್ರಾತ್ಯಕ್ಷಿಕೆಯಲ್ಲಿ ವಿವಿಧ ತಾಳ, ಮಟ್ಟು ಮತ್ತು ಪಾತ್ರಗಳ ವೇಗಗಳನ್ನು ಪ್ರಸ್ತುತಪಡಿಸಲಾಗಿತ್ತು.

ಅಭಿಮನ್ಯು ಕಾಳಗ ಪ್ರಸಂಗ. ಧರ್ಮರಾಯ ಚಿಂತೆಯಲ್ಲಿರುವಾಗ ಅಭಿಮನ್ಯುವಿನ ಪ್ರವೇಶ. ಮೂರನಾಲ್ಕು ಏರು ಪದ್ಯಗಳು. ಪುಂಡುವೇಷವಾದ್ದರಿಂದ ಸಹಜವಾಗಿ ಹಿಮ್ಮೇಳ, ಮುಮ್ಮೇಳಗಳು ಈ ಹಂತದಿಂದ ವೇಗ ಪಡೆದುಕೊಳ್ಳುತ್ತದೆ. ಪ್ರಸಾದ ಬಲಿಪ ಹೇಳುತ್ತಾರೆ, "ಇಡೀ ಪ್ರಸಂಗದಲ್ಲಿ ಅಭಿಮನ್ಯುವಿಗೆ ಬಹುತೇಕ ವೀರ ರಸದ ಪದ್ಯಗಳಿವೆ. ಪದ್ಯಗಳ ಮೂಲಕ ಪಾತ್ರದ ವೇಗಗಳ ವ್ಯತ್ಯಾಸಗಳನ್ನು ಹಿಂದಿನವರು ಮಾಡಿದ್ದರು. ಕಲಾವಿದ ಪದ್ಯಗಳ ವೇಗಕ್ಕೆ ಸರಿಯಾಗಿ ಹೆಜ್ಜೆ ಹಾಕಿದರೆ ರಂಗ ಸೊಬಗು ಜಾಸ್ತಿ. ನಿತ್ರಾಣನಾಗಲಾರ! ಮುಖ್ಯವಾಗಿ ಗಮನಿಸಬೇಕಾದುದು - ಕಲಾವಿದನ ಸೊಂಟತ್ರಾಣದ ವೇಗವು ಪಾತ್ರದ ವೇಗವಲ್ಲ, ಪ್ರಸಂಗದ ವೇಗವೂ ಅಲ್ಲ."

ದೇವೇಂದ್ರನ ಪ್ರವೇಶಕ್ಕೂ, ಇಂದ್ರಜಿತುವಿನ ಪ್ರವೇಶಕ್ಕೂ ವ್ಯತ್ಯಾಸವಿದೆ. ರಂಗಕ್ರಿಯೆಗಳಲ್ಲೂ ಬದಲಾವಣೆಯಿದೆ. ಅಭಿಮನ್ಯು, ಬಬ್ರುವಾಹನ.. ಪಾತ್ರಗಳ ನಡೆಗಳು ವಿಭಿನ್ನ. ಕಲಾವಿದನಿಗೆ ತಾಳಗತಿಯ ಜ್ಞಾನವಿದ್ದರೆ ಕಾಲಪ್ರಮಾಣದ ಕುಣಿತಗಳಿಂದ ರಂಗಕ್ಕೆ ನ್ಯಾಯ ಸಲ್ಲಿಸಬಹುದು. ಸಮಯ ಇಲ್ಲವೆಂದು ಗತಿಯನ್ನು ಬೇಕಾದಂತೆ ಬದಲಿಸಿದರೆ ಅಧೋಗತಿ! ಡಾ.ಜೋಷಿಯವರು ಮಾತಿಗೆ ಸಿಕ್ಕಾಗ ಹೇಳಿದ ಮಾತು ನೆನಪಾಯಿತು, "ಎಷ್ಟು ದೊಡ್ಡ ಪ್ರಸಂಗವಾದರೂ ಕಿರಿದು ಗೊಳಿಸಬಹುದು. ಕಿರಿದುಗೊಳಿಸುವುದೆಂದರೆ ಸನ್ನಿವೇಶವನ್ನೇ ಕಟ್ ಮಾಡುವುದಲ್ಲ. ಪಾತ್ರಕ್ಕೆ ಗರಿಷ್ಠ ಅವಕಾಶವನ್ನು ನೀಡುತ್ತಾ ಪದ್ಯಗಳನ್ನು ಸೀಮಿತಗೊಳಿಸಿದರೆ ಆಯಿತು. ಹೇಳುವಂತಹ ಪದ್ಯ, ಅದರ ನಡೆ, ಕುಣಿತದ ಪ್ರಮಾಣಗಳಲ್ಲಿ ವೈವಿಧ್ಯತೆಯನ್ನು ತರಬಹುದು."

ರಂಗದಿಂದ ಮರೆತುಹೋಗುತ್ತಿರುವ ಚೌತಾಳ, ಘಂಟಾರವ ಮಟ್ಟು, ಆದಿ ತಾಳದ ಪದ್ಯಗಳು ಕಾಲಪ್ರಮಾಣದಲ್ಲಿ ಪ್ರಸ್ತುತಪಡಿಸಿದಾದ ಸಿಗುವ ರಸಸುಖ ಶಬ್ದಕ್ಕೆ ನಿಲುಕದ್ದು. ಪ್ರಸಾದ್ ಬಲಿಪರು ಮೂರು ನಮೂನೆಯ ತಿತ್ತಿತೈಗಳನ್ನು ಹಾಡಿನ ಮೂಲಕ ತೋರಿಸಿದರು. ತಿತ್ತಿತೈ ತಾಳದ ಒಂದನೇ ಅಕ್ಷರ, ಎರಡನೇ ಮತ್ತು ಮೂರನೇ ಅಕ್ಷರದಿಂದ ಪದ್ಯಗಳನ್ನು ಎತ್ತುಗಡೆ ಮಾಡುವ ಅಪರೂಪದ ಕ್ರಮ ಗಮನಸೆಳೆಯಿತು. ಬಣ್ಣದ ವೇಷವೊಂದು ರಂಗ ಪ್ರವೇಶ ಮಾಡುವಾಗ ತೆರೆಯ ಹಿಂದೆ ಕುಣಿಯವ ಕುಣಿತದ ವೈವಿಧ್ಯಗಳನ್ನು ತೆರೆಯಿಲ್ಲದೆ ಪ್ರಸ್ತುತಪಡಿಸಲಾಗಿತ್ತು.

ಪ್ರಾತ್ಯಕ್ಷಿಕೆ ಮುಗಿದು ವಾರ ಕಳೆದರೂ ಪ್ರಸಾದ ಬಲಿಪರ ಹಾಡುಗಳು ನನ್ನೊಳಗೆ ಯಾಕೆ ರಿಂಗಣ ಇನ್ನೂ ಹಾಕುತ್ತಿವೆ? ಹೀಗೆಂದರೆ ಅಹಂಕಾರವಾದೀತೇನೋ? ರಂಗದಲ್ಲಿ ಪಾತ್ರಗಳ ಕಾಲಪ್ರಮಾಣದ ನಡೆಗಳೇ ರಸಾವಿಷ್ಕಾರದ ಮೂಲಬೀಜ ಎಂದರೆ ತಪ್ಪಾದೀತೇ? ರಸಗಳಿಗನುಗುಣವಾದ ನಡೆಗಳನ್ನು ಪದ್ಯಗಳೇ ಅಜ್ಞಾತವಾಗಿ ಸೂಚಿಸುವಾಗ ಅದನ್ನು ನೋಡುವ ಸೂಕ್ಷ್ಮ ಮನಸ್ಸನ್ನು ಸಜ್ಜುಗೊಳಿಸಬೇಕಾದ ಹಾದಿಯಲ್ಲಿದ್ದೇವೆ. ರಸಗಳನ್ನು ಕಟ್ಟಿಕೊಡದ ಪಾತ್ರವು ರಂಗದಲ್ಲಿ ವಿಜೃಂಭಿಸಬಹುದು. ಚಪ್ಪಾಳೆಗಳ ಮಾಲೆಗಳನ್ನು ಪಡೆಯಬಹುದು. ಅಭಿಮಾನಿಗಳ ಸಂತೋಷವನ್ನು ಇಮ್ಮಡಿಗೊಳಿಸಬಹುದು. ಆದರೆ ಯಕ್ಷಗಾನದ ಒಲವು ಗಳಿಸಲಾರದು.

*********************


ಲೇಖನ ಕೃಪೆ : yakshamatu.blogspot


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ